Sunday, August 26, 2018

ಮೈಸೂರು ಮಲ್ಲಿಗೆ (1992)

ರಾಯರು ಬಂದರು...


ಚಲನ ಚಿತ್ರ:- ಮೈಸೂರು ಮಲ್ಲಿಗೆ (1992)
ಕವಿ:- ಕೆ. ಎಸ್. ನರಸಿಂಹಸ್ವಾಮಿ
ಸಂಗೀತ:- ಸಿ. ಅಶ್ವಥ್ 
ಗಾಯಕರು:- ರತ್ನಮಾಲಾ ಪ್ರಕಾಶ್ 
ನಿರ್ದೇಶನ:- ಟಿ.ಎಸ್. ನಾಗಾಭರಣ 
ನಟನೆ:- ಗಿರೀಶ್ ಕಾರ್ನಾಡ್, ಸುಧಾರಾಣಿ 


ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದೆ ಬಾನಿನ ನಡುವೆ ಚಂದಿರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು ||

ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
ಒಳಗಡೆ ದೀಪದ ಬೆಳಕಿತ್ತು 
ಘಮ ಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ ರಾಯರ ಕರೆದಿತ್ತು
ಭೂಮಿಗೆ ಸ್ವರ್ಗವೆ ಇಳಿದಿತ್ತು 

ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಸಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು
ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗು ನಗುತಾ
ಬಿಸಿ ಬಿಸಿ ಹಾಲಿನ ಬಟ್ಟಲ ತಂದರು ಅಕ್ಕರೆಯಲಿ ಮಾವ
ಮಡದಿಯ ಸದ್ದೇ ಇರಲಿಲ್ಲ 

ಮಡದಿಯ ತಂಗಿಯ ಕರೆದಿಂತೆಂದರು "ಅಕ್ಕನ ಕರೆಯಮ್ಮ"
ಮೆಲು ದನಿಯಲಿ ನಾದಿನಿ ಇಂತೆಂದಳು "ಪದುಮಳು ಒಳಗಿಲ್ಲ"
ನಕ್ಕಳು ರಾಯರು ನಗಲಿಲ್ಲ 

ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ
ಪದುಮಳ ಬಳೆಗಳ ದನಿ ಇಲ್ಲ 
ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
ಒಳಮನೆಯಲಿ "ನೀರಾಯಿತು" ಎಂದಳು ನಾದಿನಿ ರಾಗದಲಿ
"ಯಾರಿಗೆ" ಎನ್ನಲು ಹರುಷದಲಿ 
ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ


*********************************************************************************


ದೀಪವು ನಿನ್ನದೇ

ರಚನೆ: ಡಾ. ಕೆ. ಎಸ್. ನರಸಿಂಹಸ್ವಾಮಿ 
ಗಾಯಕರು: ಎಸ್.ಜಾನಕಿ 

ದೀಪವು ನಿನ್ನದೇ ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು... //ಪ//

ಬೆಟ್ಟವು ನಿನ್ನದೆ, ಬಯಲು ನಿನ್ನದೆ,
ಹಬ್ಬಿ ನಗಲಿ ಪ್ರೀತಿ..
ನೆರಳು, ಬಿಸಿಲು ಎಲ್ಲವೂ ನಿನ್ನವೆ
ಇರಲಿ ಏಕರೀತಿ..

ಆಗೊಂದು ಸಿಡಿಲು, ಈಗೊಂದು ಮುಗಿಲು,
ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು
ಮುಗುಳುನಗೆ ನಿನಗೆ ನಮಸ್ಕಾರ
ಕಡಲು ನಿನ್ನದೆ, ಹಡಗು ನಿನ್ನದೆ
ಮುಳುಗದಿರಲಿ ಬದುಕು.....

ಅಲ್ಲಿ ರಣ ದುಂದುಭಿ, ಇಲ್ಲೊಂದು
ವೀಣೆ ನಿನ್ನ ಪ್ರತಿಧ್ವನಿ,
ಆ ಮಹಾಕಾವ್ಯ, ಈ ಭಾವಗೀತೆ
ನಿನ್ನ ಪದಧ್ವನಿ...

ದೀಪವು ನಿನ್ನದೇ ಗಾಳಿಯು ನಿನ್ನದೆ,
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ,
ಮುಳುಗದಿರಲಿ ಬದುಕು...

*********************************************************************************

ಅಕ್ಕಿ ಆರಿಸುವಾಗ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ 
ಕವನ ಸಂಕಲನ: ಮೈಸೂರು ಮಲ್ಲಿಗೆ 

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು |ಪ|
ತಗ್ಗಿರುವ ಕೊರಳಿನ ಸುತ್ತ ಕರಿಮಣೆ ಒಂದೆ
ಸಿಂಗಾರ ಕಾಣದ ಹೆರಳು

ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲ್ಲಿ
ಹದಿನಾರು ವರುಶದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು |೧|

ಕಲ್ಲ ಹರಳನ್ನು ಹುಡುಕಿ
ಎಲ್ಲಿಗೊ ಎಸೆವಾಗ ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೊ ಹೋದ ಇತ್ತ ಯಾರೊ ಬಂದ
ಕಡೆಗೆಲ್ಲ ಕಣ್ಣು ಬಿದ್ದು ಬಂಗಾರವಿಲ್ಲದ ಬೆರಳು |೨|

ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಬೆಸರಿಯ ಕಿರಿ ಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು |೩|

*******************************************************************************

ಸಿರಿಗೆರೆಯ ನೀರಿನಲಿ

ಕವಿ: ಕೆ. ಎಸ್. ನರಸಿಂಹಸ್ವಾಮಿ 
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಸಿರಿಗೆರೆಯ ನೀರಿನಲಿ, ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು |
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು ||

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು |
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು ||

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನಾ ದನಿಯಲ್ಲಿ ನಿನ್ನ ಹೆಸರು |
ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು ||

ಮರೆತಾಗ ತುಟಿಗೆ ಬಾರದೆ ಮೋಡ ಮರೆಯೊಳಗೆ ಬೆಳ್ದಿಂಗಳೊ ನಿನ್ನ ಹೆಸರು |
ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು ||

********************************************************************************

ನಿನ್ನೊಲುಮೆಯಿಂದಲೇ

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರ ಮುಖಿ ನೀನೆನಲು ತಪ್ಪೇನೇ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೇ?
ನಿನ್ನ ನಗೆ ಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೇ?
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೇ?
ನಿನ್ನ ಕಿರು ನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೆನೇ?
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೇ?

********************************************************************************

ಮದುವೆಯಾಗಿ

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ?
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ |
ಹಿಂದೆ ಮುಂದೆ ನೋಡದೆ ಎದುರು ಮಾತನಾಡದೆ ||

ಕೋಣೆಯೊಳಗೆ ಬಳೆಯ ಸದ್ದು ನಗುವರತ್ತೆ ಬಿದ್ದು ಬಿದ್ದು |
ಸುಮ್ಮನಿರಲು ಮಾವನವರು ಒಳಗೆ ಅಕ್ಕ ಭಾವನವರು |
ಎಂದು ತುಂಟ ಹುಡುಗನು ಗುಟ್ಟ ಬಯಲಿಗೆಳೆವನು ||

ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು |
ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತವುಂಡು |
ದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ? ||

ಯಾರು ಕದ್ದು ನೋಡಿದರೇನು ಊರೆ ಎದ್ದು ಕುಣಿದರೇನು?
ಜನರ ಬಾಯಿಗಿಲ್ಲ ಬೀಗ ಹೃದಯದೊಳಗೆ ಪ್ರೇಮ ರಾಗ |
ಎಂಥ ಕೂಗನಳಿಸಿದೆ ಬೆಳ್ಳಗೆ ಬದುಕ ಹರಿಸಿದೆ ||

ಹಿಂದೆ ಅದಕೆ ಕರೆವುದು ನನ್ನ ಹುಡುಗಿ ಎನುವುದು |
ಹೂವ ಮುಡಿಸಿ ನಗುವುದು ಅಪ್ಪಿ ಮುತ್ತನಿಡುವುದು |
ಬಾರೆ ನನ್ನ ಶಾರದೆ ಬಾರೆ ಅತ್ತ ನೋಡದೆ ||

********************************************************************************

ಮೊದಲ ದಿನ ಮೌನ

ಕವಿ: ಕೆ ಎಸ್ ನರಸಿಂಹಸ್ವಾಮಿ 
ಸಂಗೀತ: ಸಿ ಅಶ್ವಥ್ 
ದ್ವನಿಸುರುಳಿ: ಮೈಸೂರು ಮಲ್ಲಿಗೆ 
ಗಾಯಕರು: ರತ್ನಮಾಲಾ ಪ್ರಕಾಶ್


ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ, ಬಿಡಿಹೂವ ಮುಡಿದಂತೆ
ಹತ್ತು ಕಡೆ ಕಣ್ಣು, ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ.

ಎರಡನೆಯ ಹಗಲು ಇಳಿಮುಖವಿಲ್ಲ, ಇಷ್ಟು ನಗು-
ಮೂಗುತಿಯ ಮಿಂಚು ಒಳ-ಹೊರಗೆ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಹರಿದಂತೆ.

ಮೂರನೆಯ ಸಂಜೆ ಹೆರಳಿನ ತುಂಬ
ದಂಡೆ ಹೂ, ಹೂವಿಗೂ ಜೀವ ಬಂದಂತೆ;
ಸಂಜೆಯಲಿ ರಾತ್ರಿ ಇಳಿದಂತೆ,
ಬಿರುಬಾನಿಗೂ ಹುಣ್ಣಿಮೆಯ
ಹಾಲು ಹರಿದಂತೆ.

********************************************************************************

ಒಂದಿರುಳು ಕನಸಿನಲಿ

ಕವಿ: ಕೆ. ಎಸ್. ನರಸಿಂಹಸ್ವಾಮಿ 
ಸಂಗೀತ: ಸಿ. ಎಸ್. ಅಶ್ವಥ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 


ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ?
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ,
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

*********************************************************************************

ಬಳೆಗಾರ ಚೆನ್ನಯ್ಯ ಬಾಗಿಲಿಗೆ

ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ   
ಸಂಗೀತ: ಸಿ.ಎಸ್. ಅಶ್ವಥ್   
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಂ


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ಮುಡಿದ ಮಲ್ಲಿಗೆ ಅರಳು ಬಾಡಿಲ್ಲ ರಾಯರೆ
ತವರಿನಲಿ ತಾಯಿ ನಗುತಿಹಳು
ಕುಡಿದ ನೀರು ಅನುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು ಅಮ್ಮನಿಗೆ ತವರಿನಲಿ
ಅಂಗಳದ ತುಂಬ ಜನರಿತ್ತು
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದಲ್ಲಿ ನಿಮ್ಮ ನೆನೆದರು ತಾಯಿ ಕುಲವಂತೆ
ದೀಪದಲಿ ಬಿರುಗಣ್ಣನಿರಿಸಿ
ಬೇಕಾದ ಹಣ್ನಿಹುದು, ಹೂವಿಹುದು ತವರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲ ಊರಿನಲಿ
ನಿಮಗಿಲ್ಲ ಒಂದು ಹನಿ ಕರುಣ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ

ದಿನವಾದ ಬಸುರಿ ಹುಸ್ಸೆಂದು ಹಿಗ್ಗುಸಿರೆಳೆದು
ಹುದಿಯ ಬಾರದು ನನ್ನ ದೊರೆಯೆ
ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಳ ಚಿಲುಮೆ
ಉಳಿಸು ಮಾವನ ಮೇಲೆ ಮಗಳೇನ ಮಾಡಿದಳು
ನಿಮಗೇತಕೀ ಕಲ್ಲು ಮನಸು
ಹೋಗಿ ಬನ್ನಿರಿ ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು...
ಅಮ್ಮನಿಗೆ ನಿಮ್ಮದೇ ಕನಸು....

*********************************************************************************

ಹಕ್ಕಿಯ ಹಾಡಿಗೆ

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ   
ಸಂಗೀತ: ಸಿ. ಎಸ್. ಅಶ್ವಥ್  
ಗಾಯನ: ಎಸ್. ಜಾನಕಿ 


ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ
ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ

ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ
ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ

ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ

ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನೆಡೆಯುವ ಆಸೆ

ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ

*********************************************************************************

ನಿನ್ನ ಪ್ರೇಮದ ಪರಿಯ ನಾನರಿಯೆ

ಸಾಹಿತ್ಯ : ಕೆ.ಎಸ್. ನರಸಿಂಹಸ್ವಾಮಿ   
ಸಂಗೀತ : ಸಿ.ಅಶ್ವಥ್   
ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ


ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು  ನಿನ್ನೊಳಿದೆ ನನ್ನ ಮನಸು
ಸಾಗರನ ಹೃದಯದಲಿ ರಕ್ತಪರ್ವತಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲೆ ಕಣ್ಣಚುಂಬಿಸಿ ಮತ್ತೆ ಸಾಗುವುದು ಕನಸಿನಂತೆ
ಅಲೆಬಂದು ಕರೆವುದು ನಿನ್ನೊಲುಮೆ ಅರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೊರ್ತಿಮಹಿಮೆ


*********************************************************************************

No comments:

Post a Comment